“ದುನಿಯಾ” ಸೂರಿ + “ಲಾಂಗ್” - TopicsExpress



          

“ದುನಿಯಾ” ಸೂರಿ + “ಲಾಂಗ್” ಲೈಫ್ ಶಿವಣ್ಣ = “ಕಡ್ಡಿಪುಡಿ” ದುನಿಯಾ ಮತ್ತು ಇಂತಿ ನಿನ್ನ ಪ್ರೀತಿಯ ಆದಮೇಲೆ ನಿರ್ದೇಶಕ ಸೂರಿ ಮರೆಯಾಗುತ್ತಾ, ಹೀರೋಯಿಸಂ ಮೆರೆಯುತ್ತಾ ಬಂದ ಸಿನಿಮಾಗಳನ್ನು ನೋಡಿ ಮೂಗು ಮುರಿದವರಿಗೆ ತಕ್ಕ ಉತ್ತರ – “ಕಡ್ಡಿಪುಡಿ” ಇತ್ತೀಚಿನ ಎಲ್ಲಾ (ನಾಯಕರ) collection ದಾಖಲೆಗಳು ‘ಪುಡಿಪುಡಿ’ ಆಗುವ ಸಾಧ್ಯತೆಯನ್ನು ಇಂದಿನ ಮಟ್ಟಿಗೆ ಚಿತ್ರಮಂದಿರದಲ್ಲಿ ಕಂಡದ್ದು ನಿಜ...!! ನಾನು ಸಿನಿಮಾ ನೋಡುವ ಮುನ್ನ “ನಮ್ಮ ತಂಡದವರ ಸಿನಿಮಾ” ಎಂಬ ಯಾವುದೇ ಪೂರ್ವಗ್ರಹ ಪೀಡಿತ ಮನಸ್ಥಿತಿಯಲ್ಲಿ ಇರಲಿಲ್ಲ... ಎಲ್ಲರೊಳಗೊಂದಾಗಿ ಸಿನಿಮಾ ನೋಡೋಕೆ ಹೋಗಿದ್ದೆ.. ಚಿತ್ರದ ಆರಂಭದಿಂದ ಅಂತ್ಯದ ತನಕ ಪ್ರೇಕ್ಷಕರನ್ನು ಕುರ್ಚಿಗೆ ಕಟ್ಟಿಟ್ಟುಕೊಂಡ ಅನುಭವ ಆಯ್ತು... ಸೂರಿ ಕಳೆದುಹೋದರೇನೋ ಎಂದುಕೊಳ್ಳುತ್ತಿರುವಾಗಲೇ ತಮ್ಮ “ಖದರ್” ಏನು ಅಂತ “ಕಡ್ಡಿಪುಡಿಯ ಮೂಲಕ” ತೋರಿಸಿದ್ದಾರೆ... ಮೇಲ್ನೋಟಕ್ಕೆ ಅಂದರೆ ಸಿನಿಮಾದ ಹೆಸರು, ಪ್ರಚಾರ ಚಿತ್ರಗಳು ಮತ್ತದೇ ಹಳಸಲು ಭೂಗತ ಜಗತ್ತಿನ ಕಥೆಗಳಂತೆ ಕಂಡರೂ ಒಳಗೆ ಅದು ಮಾಡುವ ಸದ್ದೇ ಬೇರೆ.. ಬದುಕಿಗಾಗಿ ಪರದಾಡುವ ‘ಹಳೇ ಪಂಟ್ರು’ ಪಡುವ ಪಾಡುಗಳೇ ಚಿತ್ರದ ಮೂಲ ಕಥಾಭಾಗ...!! ಅದರ ವಿಸ್ಕೃತ ರೂಪದ ಚಿತ್ರಕಥೆಯಲ್ಲಿ ಮತ್ತು ಒಂದೆರಡು ಪಾತ್ರಪೋಷಣೆಗಳಲ್ಲಿ ನೀವು ಈಗಾಗಲೇ ನೋಡಿರುವ ಕೆಲವು ಚಿತ್ರಗಳ ‘ನೆರಳು’ ಕಂಡರೂ ಅವು ನೆರಳಷ್ಟೇ ಹೊರತು ಮುಖ್ಯ ಭಾಗಕ್ಕೆ ಅಂಟಿಕೊಂಡ ಮೈಲಿಗೆಯಾಗಲೀ ಅಥವ ಆಕೃತಿಗಳಾಗಲಿ ಅಲ್ಲ...!! ಮೊದಲಾರ್ಧದ ವೇಗಕ್ಕೆ ಹೋಲಿಸಿದರೆ ದ್ವಿತಿಯಾರ್ಧ ಸ್ವಲ್ಪ ವೇಗ ಕಮ್ಮಿ ಅನ್ನಿಸಿದರೂ ವಿಷಯ ಹಿಡಿದಿಟ್ಟುಕೊಳ್ಳುತ್ತದೆ... ಗಾಂಧಿನಗರದಲ್ಲಿ ಮಾಮೂಲಿ ಕಮರ್ಷಿಯಲ್ ಸಿನಿಮಾ ಆಗಬಹುದಾಗಿದ್ದ ಎಳೆಗೊಂದು ಹೊಸದೆನಿಸುವ ಕಥಾರೂಪದ ರೇಷ್ಮೆ ಲಂಗೋಟಿ ಹೊಲಿಸಿ ಹಾಕಿ ಸಿನಿಮಾದ ಸೊಂಟಕ್ಕೊಂದು ಚಿನ್ನದ ಉಡುದಾರ ಕಟ್ಟಿದ್ದಾರೆ ಜಾಣ ನಿರ್ದೇಶಕ ಸೂರಿ...!! ಅಂತ್ಯ ಅರ್ಥಪೂರ್ಣವೋ ಅಪೂರ್ಣವೋ ಎಂಬ ಚರ್ಚೆ-ಜಿಜ್ಞಾಸೆ ಹುಟ್ಟಿಕೊಳ್ಳುವ ಮೊದಲೇ ಪ್ರೇಕ್ಷಕರ ಗುಂಪಿನಲ್ಲಿ “ಸೂಪರ್ ಸಿನಿಮಾ ಗುರು” ಅನ್ನೋ ಮಾತು ತೇಲಿಬಂದು ಆಡಿಕೊಳ್ಳುವ ಬಾಯಿಗಳನ್ನು ಮುಚ್ಚಿಸಬಹುದು... ಇಲ್ಲವೇ ವಾದಕ್ಕಿಳಿದು ಅಭಿಪ್ರಾಯ ಮಂಡನೆಯ ವಾಗ್ವಾದಗಳಾಗಬಹುದು...!! ಅದು ಪ್ರೇಕ್ಷಕರ ಸ್ವಾತಂತ್ರ... ಶಿವಣ್ಣನ ಅಭಿಮಾನಿಗಳಿಗಂತು “ಓಂ” ಮತ್ತು “ಜೋಗಿ” ಸಿನಿಮಾಗಳ ನಂತರ ಅಭೂತಪೂರ್ವ “ಲಾಂಗು-ಲೈಫು-ಲವ್ವಿನ” ಸಮತೋಲನ ಮಿಶ್ರಣದ ಜೊತೆಗೆ ಪ್ರತೀ ಐದು ನಿಮಿಷಕ್ಕೊಮ್ಮೆ ಚಪ್ಪಾಳೆ ಶಿಳ್ಳೆ ಹಾಕುವಂತ ದೃಶ್ಯವೈಭೋಗ ಹಾಗೂ THE REAL POWER OF SANDALWOOD KING ದರ್ಶನ ಆಗಿದ್ದು ಕಡ್ಡಿಪುಡಿ ಸಿನಿಮಾದಲ್ಲಿ... ಬೇರೆಯವರು ಹಿಡಿಯೋ ಲಾಂಗು ಪಡ್ಡೆಗಳಿಗೆ ಮಾತ್ರ ಹುಚ್ಚೆಬ್ಬಿಸಬಹುದು, ಆದರೆ ಶಿವಣ್ಣ ಲಾಂಗು ಹಿಡಿದರೆ..... ಹಿಡಿದರೆ... Oops!! CBFC certificate “A” ಆಗಿರೋದ್ರಿಂದ ಹದಿನೆಂಟರಿಂದ ಕಣ್ಣು ಕಾಣ್ಸೋ ಎಲ್ಲಾ ವಯಸ್ಸಿನವರಿಗೂ ಮೆಚ್ಚುಗೆ ಆಗುತ್ತದೆ ಬಿಡಿ.... ಚಿತ್ರದ highlights ಅಂತ ಹೇಳೋಕೆ ಏನಿದೆ ಅಂತ ಹುಡುಕೋದು..? ಒಂದಿಷ್ಟಿದೆ... ಚಿತ್ರದ ಒಟ್ಟು ತೂಕ ಒಂದು ಕಡೆ ಆದರೆ ಇನ್ನೊಂದು ಕಡೆ ಅದಕ್ಕೆ ಸರಿಯಾಗಿ ತಕ್ಕಡಿ ತೂಗಿಸಿರುವುದು ಶಿವಣ್ಣ.. Century Starಗೆ ಇದು ಬಹಳ ವಿಭಿನ್ನವೆನಿಸುವ ಪಾತ್ರ... ನಿರ್ಭಾವ ಮುಖದಲ್ಲಿದ್ದರೂ ಕಣ್ಣಲ್ಲೇ ಸದ್ದು ಮಾಡುವ ಕಡ್ಡಿಪುಡಿಯ ಪಾತ್ರಕ್ಕೆ ಶಿವಣ್ಣನನ್ನು ಬಿಟ್ಟರೆ ಮತ್ತೊಬ್ಬರನ್ನು ಊಹಿಸಿಕೊಳ್ಳುವುದು ಅಸಾಧ್ಯವಾಗುತ್ತದೆ.. ಸುಮ್ಮನಿದ್ದರೂ ಚಪ್ಪಾಳೆ ಗಿಟ್ಟಿಸಿದ ದೃಶ್ಯಗಳಿಗೆ ಶಿವಣ್ಣ ಕಾರಣ... ರಾಧಿಕಾ ಪಂಡಿತ್ ಅಂದ್ರೆ ಹಂಗಿಂಗಲ್ಲ, ಅವರನ್ನ ಹಿಂಗ್ ನೋಡಿರಕ್ಕೆ ಚಾನ್ಸೇ ಇಲ್ಲ ಬಿಡಿ...!! ಸೂರಿಯವರ ಸಿನಿಮಾಗಳಲ್ಲಿ ಹೊಟ್ಟೆ ಕೆರೆದುಕೊಂಡು ಗಹಗಹಿಸಿ ನಗುತ್ತಿದ್ದ ರಂಗಾಯಣ ರಘು full decent ಆಗಿ, ಇನ್-ಶರ್ಟ್ ಮಾಡ್ಕೊಂಡು ಅವರ ಪಾತ್ರದ ಮಟ್ಟಿಗೆ ನಮ್ಮ ಊಹೆಗಳನ್ನು ತಿರುಗಾ-ಮುರುಗಾ ಮಾಡ್ತಾರೆ... ಅರೆದೇಹವಾಗಿ ಮೈಸೂರಲ್ಲಿದ್ದ ರೇಣುಕಾಪ್ರಸಾದ್ ತಮ್ಮಲ್ಲಿನ್ನೂ ನಟನಾ ಚಾತುರ್ಯ ಸತ್ತಿಲ್ಲ ಅಂತ ಮುಖದಲ್ಲಿ ವ್ಯಕ್ತ ಪಡಿಸೋ ಪರಿ ಕಾಲಿನ ಸ್ವಾಧೀನ ಕಳೆದುಕೊಂಡ ರಾಜಕಾರಣಿಯ ಪಾತ್ರದಲ್ಲಿ ಸೂಪರ್.. ಅವಿನಾಶ್, ಅನಂತನಾಗ್, ರಾಜೇಶ್ ನಟರಂಗ, ಶರತ್ ಲೋಹಿತಾಶ್ವ ಎಲ್ಲಾರು ಕಡ್ಡಿಪುಡಿಗಾಗಿ ಅವರವರ ಬೌಂಡರಿ ದಾಟಿಬಿಟ್ಟಿದ್ದಾರೆ...!! ಸೌಂದರ್ಯ ಸಮರ ಹಾಡು ಸಿನಿಮಾಗೆ ಅನವಶ್ಯಕ ಅನ್ನಿಸಿತಾದರೂ ತೀರಾ ಅಶ್ಲೀಲವೆನ್ನಿಸದ ರೀತಿಯಲ್ಲಿ “ಐಂದ್ರಿತಾ ರೇ” ಅವರನ್ನು “ಐಟಮ್ ಹಾಡಿನ ಗುಂಪಿಗೆ ಸೇರದ” ರೀತಿಯಲ್ಲಿ ತೋರಿಸಿದ್ದಾರೆ... ಸೌಂದರ್ಯ ಸಮರ ಹಾಡು ಮತ್ತು ಒಟ್ಟು ಸಿನಿಮಾದ ಸೌಂದರ್ಯಕ್ಕೆ ‘ಮೂಲಭೂತ ಹಕ್ಕುದಾರ’ ಮುಂಗಾರುಮಳೆ ಖ್ಯಾತಿಯ ಛಾಯಾಗ್ರಾಹಕ ಕಂ ಕನ್ನಡದ "ಕ್ಯಾಮರಾ ಮಾಂತ್ರಿಕ ಕೃಷ್ಣ”... ಹರಿಕೃಷ್ಣ ಮತ್ತು ಯೋಗರಾಜ್ ಭಟ್ ಇಬ್ರೂ ಸೇರಿಕೊಂಡ್ರೆ ಆಗೋದೆಲ್ಲಾ ಇಂಥಾ ಅನಾಹುತಗಳೇ...!! “ಬುಡುಬುಡುಕೆ ಮಾಲಿಂಗ್ ಮೊನ್ನೆ ಸತ್ತೋದ ಮೊನ್ನೆ ಸತ್ತೋದ..” ಈ ಹಾಡಿಗೆ ಬಾಲ್ಕನಿಯಿಂದ ತೂರಿದ ಚಿಲ್ಲರೇ ಕಾಸಿಗೆ ಕೆಳಗೆ ಅದೆಷ್ಟು ಜನರ ತಲೆ ತೂತಾಗಿದ್ದಾವೋ...? ಪರದೆಯ ಮುಂದೆ ಡ್ಯಾನ್ಸ್ ಮಾಡಲು ಹೋಗಿ ಜಾರಿ ಬಿದ್ದ ಅಭಿಮಾನಿ ದೇವರುಗಳ ಸೊಂಟ ಉಳುಕಿದ್ರೆ ದೇವರೇ ಗತಿ...!! ಹರಿಕೃಷ್ಣ ಅವರ ಹಿನ್ನೆಲೆ ಸಂಗೀತಕ್ಕೆ ಕಿವಿಗಳು ಏನೇನೋ ಆಗಿ ಗುಂಯ್ ಗುಟ್ತಾ ಇನ್ನೇನೋ ಆದದ್ದಂತೂ ಸಹನೀಯ ಹಿನ್ನೆಲೆ ಸಂಗೀತ ಸಂಯೋಜನೆ...!! Special Recognition- ಸಂಕಲನಕಾರ ದೀಪು ಎಸ್. ಕುಮಾರ್ ಅವರ ಅಂದಾಜ್ ಕಟಿಂಗ್ ಬೊಂಬಾಟ್ ಫಿಟಿಂಗ್...!! ಒಂದು ಸಿನಿಮಾಗೆ ಆ ಸಿನಿಮಾದ ಎಲ್ಲಾ ತಂತ್ರಜ್ಞರು ಮತ್ತು ನಟರು ನಿಯತ್ತಾಗಿ ದುಡಿದರೆ ಏನಾಗಬೇಕೋ ಅದೇ ಆಗಿದೆ... ಕಳೆದವಾರ ಬಿಡುಗಡೆ ಆದ ನಿರೀಕ್ಷಿತ ಸಿನಿಮಾ ನೋಡಿ ಬೇಜಾರಾಗಿ, ಆ ಬೇಜಾರನ್ನ ಮರೆಯಲು ತನ್ನ ಬಳಿ ಇದ್ದ ಕಾಸೆಲ್ಲವನ್ನು ಖರ್ಚು ಮಾಡಿ “ಎಣ್ಣೆ ಹೊಡ್ಕೊಂಡ್” ಮಲಗಿದ್ದ ನಮ್ಮ ಹುಲಿಕುಂಟೆ ಬಿಳಿಕುದುರೆ ಪುರುಷ ಇವತ್ತು “ಕಡ್ಡಿಪುಡಿ” ಸಿನಿಮಾ ನೋಡಿ ಫುಲ್ ಖುಷಿಯಾಗಿಬಿಟ್ಟ... ಅವನ ಆ ಖುಷಿಗೆ ಕುಡಿಯೋಕೆ ಕಾಸಿಲ್ಲದೆ ಹತಾಶನಾಗಿ ಒಂದು ಮಾತು ಅಂದ – “ಮಚ್ಚಾ.. 4 star machcha.. ಒಳ್ಳೆ ಸಿನಿಮಾ ನೋಡಿದ್ ಖುಷೀಗೆ ಕುಡಿಯಣ ಅಂದ್ರೆ ಕಾಸಿಲ್ಲ... ಬಾಲ್ಕನಿಗೆ ಬರೋದ್ರ ಬದಲು ಗಾಂಧಿ ಕ್ಲಾಸಿಗಾದ್ರೂ ಹೋಗಿದ್ರೆ ಮೇಲಿಂದ ಹಾರಿಕೊಂಡ್ ಬರೋ ಚಿಲ್ಲರೇ ಕಾಸಿಗೆ ಸುಮ್ನೆ ಕೈ ಒಡ್ಕೊಂಡ್ ನಿಂತಿದ್ರೆ ಸಾಕಿತ್ತು.. ಹೊಟ್ಟೆ ತುಂಬ ಕುಡಿಯೋ ಅಷ್ಟು ಕಾಸು ಸಿಕ್ಕೋದು...!! ಈಗ್ ಹೋದ್ರೆ ಥಿಯೇಟರ್ ಹುಡುಗ್ರು ಗುಡಿಸಿ ಗುಡ್ಡೆ ಹಾಕಿ share ಮಾಡ್ಕೊಂಡಿರ್ತಾರೆ... ಬಾ ಮಚ್ಚ ಒಂದ್ ನೈಂಟಿ ಕೊಡ್ಸು... Counter sip ಸಾಕು ಮಚ್ಚಾ...”
Posted on: Sat, 08 Jun 2013 11:29:18 +0000

Trending Topics



Recently Viewed Topics




© 2015