Loved this one on UK - 10 mins free maadkondu, odi! By Srivatsa - TopicsExpress



          

Loved this one on UK - 10 mins free maadkondu, odi! By Srivatsa Joshi - must read article on Ulidavaru Kandante !! ........ ಬೇಡಾ ನಂಬಬೇಡಾ... ಜೀವ ಹೋದರೂ ಕನ್ನಡ ಪತ್ರಿಕೆಗಳಲ್ಲಿನ ಚಿತ್ರವಿಮರ್ಶೆಗಳನ್ನು ನಂಬಬೇಡ. ಉಳಿದವರು ಕಂಡಂತೆ ಬಗ್ಗೆ ಅವು ಬರೆದಿರೋ ವಿಮರ್ಶೆಯನ್ನಂತೂ ದೇವರಾಣೆಗೂ ನಂಬಬೇಡ. ಅದರಲ್ಲೂ ಕಪ್ರ, ಪ್ರವಾ, ವಿಕ, ವಿವಾ ಗಳ ಪ್ರಲಾಪವನ್ನು ಕೇಳಲೇಬೇಡ. ಉದಯವಾಣಿಯಲ್ಲಿನ ವಿಮರ್ಶೆಯನ್ನು ಓದದೆ ಬಿಡಬೇಡ. ಇದು, ಸದಭಿರುಚಿಯ ಕನ್ನಡ ಸಿನೆಮಾ ಪ್ರೇಕ್ಷಕನಿಗೆ ವಾಷಿಂಗ್ಟನ್ ಡಿಸಿಯಿಂದ ಒಬ್ಬ ಶ್ರೀ(ವತ್ಸ)ಸಾಮಾನ್ಯ ಕನ್ನಡಿಗನ ಕಿವಿಮಾತು. ಇವತ್ತು ಭಾನುವಾರ (ಮಾರ್ಚ್ 30) ಬೆಳಿಗ್ಗೆ ಹತ್ತು ಗಂಟೆಗೆ ಇಲ್ಲಿನ AMC ಸಿನೆಮಾ ಕಾಂಪ್ಲೆಕ್ಸ್‌ನಲ್ಲಿ ’ಉಳಿದವರು ಕಂಡಂತೆ’ ಸಿನೆಮಾ ಪ್ರದರ್ಶನ ಇತ್ತು. ಅಮೆರಿಕದ ಇತರ ನಾಲ್ಕು ಕಡೆಗಳಲ್ಲಿ (ನ್ಯೂಜೆರ್ಸಿ, ಶಿಕಾಗೊ, ಡೆಟ್ರಾಯಿಟ್ ಮತ್ತು ಕ್ಯಾಲಿಫೋರ್ನಿಯಾ) ಸಹ ಈ ಚಿತ್ರ ಬಿಡುಗಡೆಯಾಯ್ತು. ಕನ್ನಡ ಚಲನಚಿತ್ರ ಪ್ರದರ್ಶನ ಇಲ್ಲಿ ಅಪರೂಪವೆಂದೇ ಹೇಳಬೇಕು, ಅದರಲ್ಲೂ ’ಉಳಿದವರು ಕಂಡಂತೆ’ಯಂಥ ವಿಭಿನ್ನ ವಿಶಿಷ್ಟ, ಈರೀತಿಯದು ಕನ್ನಡದಲ್ಲಿ ಇದೇ ಮೊದಲು ಎನ್ನಲಾದ ಚಿತ್ರ, ಅಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾದಾಗಲೇ ಇಲ್ಲೂ ಪ್ರದರ್ಶನ ಕಾಣುತ್ತಿರುವುದು ನಮಗೆಲ್ಲ ಸಂತೋಷದ, ಹೆಮ್ಮೆಯ ವಿಚಾರ. ವಾಷಿಂಗ್ಟನ್ ಡಿಸಿಯಲ್ಲಿನ ಚಿತ್ರಮಂದಿರ ಹೆಚ್ಚೂಕಡಿಮೆ ಭರ್ತಿಯಾಗಿತ್ತು, ಇತ್ತೀಚೆಗೆ ಇಲ್ಲಿಗೆ ಬಂದ ನವಯುವಕರು, ಐಟಿಹುಡುಗರು ತುಂಬಿಕೊಂಡಿದ್ರು. ನಾವೆಲ್ಲ ಚಿತ್ರವನ್ನು ತುಂಬ ಇಷ್ಟಪಟ್ಟೆವು. ’ಉಳಿದವರು ಕಂಡಂತೆ’ ಚಿತ್ರದ ವಿಮರ್ಶೆ ಕನ್ನಡದ ಪ್ರಮುಖ ದಿನಪತ್ರಿಕೆಗಳ ಶನಿವಾರದ ಸಂಚಿಕೆಗಳಲ್ಲಿ ಪ್ರಕಟವಾಗಿದ್ದನ್ನು ನಾನು ಗಮನಿಸಿದ್ದೆ, ಓದಿದ್ದೆ. ಅದೇನೂ ನನ್ನ ಮೇಲೆ ಪ್ರಭಾವ ಬೀರಿತ್ತು ಅಂತಲ್ಲ. ಆದರೆ ನಾನೇ ಸಿನೆಮಾ ನೋಡಿ ಬಂದಮೇಲೆ ಆ ವಿಮರ್ಶೆಗಳು (ಒಂದನ್ನು ಹೊರತುಪಡಿಸಿ) ಎಂಥ ಪ್ರಮಾಣದಲ್ಲಿ ದಾರಿತಪ್ಪಿಸುವಂಥವಾಗಿವೆ, ವಾಸ್ತವಕ್ಕೆ ಅದೆಷ್ಟು ದೂರವಾಗಿವೆ ಎಂದು ಅರಿತು ಆಘಾತವಾಯಿತು. ’ಉಳಿದವರು ಕಂಡಂತೆ’ಯಂಥ ಒಂದು ಉತ್ತಮ ಪ್ರಯತ್ನ/ಪ್ರಯೋಗದ ಉನ್ನತ ಮಟ್ಟದ ಮೌಲ್ಯವನ್ನು ಅರಿಯಲಾರದೆ ದ್ರಾಕ್ಷಿ ಹುಳಿಯಾಗಿದೆ ಎಂದು ಮುಖ ಸಿಂಡರಿಸಿ ಓಡಿದ ನರಿಯನ್ನು ಅವು ನನಗೆ ನೆನಪಿಸಿದವು. ದ್ರಾಕ್ಷಿ ಅಲ್ಲ. ಹಲಸಿನಹಣ್ಣಿನ ದೃಷ್ಟಾಂತದ ಮೂಲಕ ಇದನ್ನು ನಿಮಗೆ ವಿವರಿಸುತ್ತೇನೆ. ಹಲಸಿನಹಣ್ಣು ತಿನ್ನಲಿಕ್ಕೆ ಸಿಹಿಯಾಗಿ ರುಚಿಯಾಗಿ ಇರುತ್ತದಾದರೂ ಅದು ಬಾಳೆಹಣ್ಣು ಅಥವಾ ಮಾವಿನಹಣ್ಣಿನಂತೆ ಅಲ್ಲವಲ್ಲ? ಮುಳ್ಳಿರುವ ಸಿಪ್ಪೆ, ಒಡೆದರೆ ಮೈಕೈಯೆಲ್ಲ ತಾಗುವ ಮೇಣ, ತೊಳೆಗಳನ್ನು ಬಿಡಿಸುವುದೆಂದರೆ ದೊಡ್ಡ ರಂಪ ರಾಮಾಯಣ. ಮತ್ತೆ ಆ ತೊಳೆಗಳೊಳಗಿನ ಬೀಜ ಬಿಸಾಡಬೇಕು. ಅಂತೂ ಕಷ್ಟದ ಕೆಲಸ. ಈ ಪತ್ರಿಕೆಗಳ ತಥಾಕಥಿತ ವಿಮರ್ಶಕಪ್ರಭೃತಿಗಳಿಗೆ ಹಲಸಿನ ತೊಳೆಗಳನ್ನು ಬಿಡಿಸಿ ಅಂದವಾಗಿ ಪ್ಲೇಟ್‌ನಲ್ಲಿ ಜೋಡಿಸಿ ಅದರ ಮೇಲೊಂದಿಷ್ಟು ಸಕ್ಕರೆಪುಡಿಯನ್ನೋ ಜೇನುತುಪ್ಪವನ್ನೋ ಸುರಿದು, ಸಾಧ್ಯವಾದರೆ ಬಾಯಲ್ಲಿ ತುತ್ತನ್ನೂ ಇಟ್ಟು (ಹಾಗೆಂದರೇನೆಂದು ನೀವೇ ಅರ್ಥಮಾಡಿಕೊಳ್ಳಿ) ಅವರಿಂದ ಆಹಾ! ಎಂಥ ಮಧುರವಾಗಿದೆ ಎಂದು ಉದ್ಗಾರ ಬರುವುದು ಅಭ್ಯಾಸವಾಗಿ ಹೋಗಿದೆ. ಅಂಥವುಗಳಿಗೆ ತೊಳೆ ಬಿಡಿಸಿ ಕೊಡುವ ಬದಲು ಇಡೀ ಹಲಸಿನಹಣ್ಣನ್ನೇ ಕೊಟ್ಟು ತೆಗೊಳ್ರಯ್ಯಾ ಬಿಡಿಸಿ ತಿಂದು ನೋಡಿ ರುಚಿ ಹೇಗಿದೆ ಅಂತ ಹೇಳಿ ಅಂದ್ರೆ ಅವು ಜನ್ಮದಲ್ಲಿ ಹಲಸಿನಹಣ್ಣು ನೋಡದೇ ಇರುವವರಂತೆ ಒದ್ದಾಡಿದರೆ ಅಚ್ಚರಿಯಿಲ್ಲ ಅಲ್ಲವೇ? ಅದೇ ಆಗಿರುವುದು ’ಉಳಿದವರು ಕಂಡಂತೆ’ ಚಿತ್ರದ ವಿಮರ್ಶೆಯ ವಿಚಾರದಲ್ಲಿ! ರಕ್ಷಿತ್ ಶೆಟ್ಟಿ ಮತ್ತು ತಂಡದವರು ತಯಾರಿಸಿರುವ ಈ ಅದ್ಭುತ ಸಿನೆಮಾ, ಈಗಿನ ಕಾಲದ ಅಸಂಬದ್ಧ ಟೈಟಲ್‌ಗಳ, ಕೆಟ್ಟ ಸಂಭಾಷಣೆಗಳ, ಐಟಂ ಸಾಂಗು, ಮಚ್ಚು ಲಾಂಗುಗಳ ಸಿದ್ಧದೂತ್ರಗಳಿಗೆ ಜೋತುಬಿದ್ದಿರುವ, ಕ್ರಿಯಾಶೀಲತೆ ಶೂನ್ಯವಾಗಿರುವ ಕಚಡಾ ಸಿನೆಮಾಗಳಿಗಿಂತ ಗಾವುದ ದೂರಕ್ಕೆ, ಗಂಭೀರ ಎತ್ತರಕ್ಕೆ ನಿಲ್ಲುವ ಸಿನೆಮಾ. ಮಾಮೂಲಿ run-of-the-mill ಚಿತ್ರ, ಪ್ಲೇಟ್‌ನಲ್ಲಿ ಬಿಡಿಸಿಟ್ಟ, ಅಷ್ಟಿಷ್ಟು ಸಕ್ಕರೆಪುಡಿಯನ್ನೂ ಚಿಮುಕಿಸಿದ ಹಲಸಿನ ತೊಳೆಗಳನ್ನು ಚಪ್ಪರಿಸಿದರಾಯ್ತು ಎಂದುಕೊಂಡು ಹೋಗಿದ್ದ ವಿಮರ್ಶಕರಿಗೆ ಈ ಸಿನೆಮಾದ ತಲೆಬುಡ ಅರ್ಥ ಆಗಿಲ್ಲ. ಟ್ರೈಲರ್ ನಂಬಿ ಸಿನೆಮಾ ನೋಡಬಾರದು ಎನ್ನುವುದಕ್ಕೆ ಈ ಮಹಾ ಬೋರ್ಗರೆಯುವ ಸಿನೆಮಾ ಸಾಕ್ಷಿ! ಎಕ್ಸ್ಟ್ರಾ ಕಾಸಿದ್ದರೆ ಮಾತ್ರ ಈ ಸಿನೆಮಾ ನೋಡಬಹುದು, ಇಲ್ಲವಾದಲ್ಲಿ ಸುಮ್ಮನೆ ಮನೆಯಲ್ಲಿ ಉಳಿದುಕೊಂಡು ಬಿಡಿ! ಎಂಬುದು ಕನ್ನಡಪ್ರಭದ ವಿಮರ್ಶೆ. ಥಿಯೇಟರ್ ನಲ್ಲಿ ಉಳಿದವರಿಗೆ ಅಪಾಯ! ಎಂಬ ಶೀರ್ಷಿಕೆ ಬೇರೆ. ಅಪಾಯ ಇರುವುದು ಚಿತ್ರಕ್ಕಲ್ಲ, ಪ್ರೇಕ್ಷಕನಿಗೂ ಅಲ್ಲ. ತನ್ನ ಮೂರ್ಖತನವನ್ನು ಜಗಜ್ಜಾಹಿರು ಮಾಡಿ ಮೂರುಕಾಸಿನ ಮರ್ಯಾದೆಯನ್ನು ಬಿಚ್ಚಿಟ್ಟ ಆ ವಿಮರ್ಶಕನಿಗೆ! ಪ್ರಜಾವಾಣಿ ಕೂಡ ಈ ಚಿತ್ರದ ವಿಮರ್ಶಾಪರೀಕ್ಷೆಯಲ್ಲಿ utter failure! ಚಿತ್ರವಿಡೀ ’ನಟನೆ’ ಇರಬೇಕು ಎಂದು ಹುಡುಕಿದ ಪ್ರಜಾವಾಣಿಗೆ ಒಂದೆರಡು ದೃಶ್ಯಗಳಲ್ಲಿ ಮಾತ್ರ ’ನಟನೆ’ ಇರುವುದು, ಮತ್ತೆಲ್ಲವೂ ಕಚ್ಚಾ ಹಲಸಿನಹಣ್ಣಿನಂತೆ ಇದೆ ಎಂಬ ಅನುಭವವಾಗಿದೆ. ಹಾಗೆ ನೋಡಿದರೆ ತನ್ನ ಮಗನಿಗಾಗಿ ಹಂಬಲಿಸುವ ತಾಯಿಯ ಪ್ರಸಂಗ ಸಿನೆಮಾದ ಹೈಲೈಟ್. ಕಿಶೋರ್ ಮತ್ತು ಯಜ್ಞಾಶೆಟ್ಟಿ ನಡುವಣ ಮೌನ ಸಂಭಾಷಣೆಯ ಪುಟ್ಟ ದೃಶ್ಯಗಳು ಕೂಡ ರಮಣೀಯವಾಗಿವೆ. ಈ ಆರ್ದ್ರತೆ ಇನ್ನಷ್ಟು ದೃಶ್ಯಗಳಿಗೆ ಪಸರಿಕೊಂಡಿದ್ದರೆ ’ಉಳಿದವರು ಕಂಡಂತೆ’ ಒಂದು ವಿಶಿಷ್ಟ ಚಿತ್ರವಾಗುತ್ತಿತ್ತು. ಅದಿಲ್ಲವಾದ್ದರಿಂದ ಇದೊಂದು ವಿಫಲ ಪ್ರಯೋಗ ಎಂದಿದೆ ಪ್ರಜಾವಾಣಿ. ಕಂಪ್ಲೀಟ್ ರಾಂಗ್. ವಿಫಲ ಆದದ್ದು ಚಿತ್ರವಲ್ಲ, ಚಿತ್ರದ ಮೌಲ್ಯ ಅರಿಯದ ಪ್ರಜಾವಾಣಿ! ಕೃತಕ ಆರ್ದ್ರತೆಯನ್ನು ತುಂಬಿಸುವುದನ್ನು (= ತೊಳೆಗಳು ಸಪ್ಪೆಇದ್ದರೆ ಜೇನಿನಲ್ಲಿ ಅದ್ದಿ ವಿಮರ್ಶಕರಿಗೆ ಕೈತುತ್ತು ಕೊಡುವುದನ್ನು) ಮಾಡದಿರುವುದರಿಂದಲೇ ಚಿತ್ರವು ನಮಗೆಲ್ಲ ಏಕ್‌ದಂ ಇಷ್ಟವಾಗಿದ. ಬಹುಶಃ ರಕ್ಷಿತ್ ಶೆಟ್ಟಿಯ ಉದ್ದೇಶವೂ ಅದೇ ಆಗಿದ್ದಿರಬೇಕು. ಇನ್ನೊಂದು ಪತ್ರಿಕೆ ವಿಜಯಕರ್ನಾಟಕ ಸಹ ವಿಮರ್ಶೆಯಲ್ಲಿ ಅನುತ್ತೀರ್ಣ! ಕತೆಯೊಂದು ಕಾಡಲು ತುಂಬಾ ಸರ್ಕಸ್ ಮಾಡಬೇಕಿಲ್ಲ. ಅದು ಹೃದಯಕ್ಕೆ ಹತ್ತಿರವಾದರೆ ಸಾಕು. ಇದು ಚಾರ್ಲಿ ಚಾಪ್ಲಿನ್ ಮಾತು. ಆದರೆ ಕತೆ ಹೇಳುವ ಕ್ರಮದಲ್ಲಿ ತುಂಬಾನೇ ಗೊಂದಲ ಮೂಡಿಸುತ್ತಾರೆ ಈ ಚಿತ್ರದ ನಿರ್ದೇಶಕರು. ಎಂದು ಬರೆದಿದೆ ಆ ಪತ್ರಿಕೆ. ವಿಜಯವಾಣಿಯ ಹಣೆಬರವೂ ಅಷ್ಟೇ. ಡಬ್ಬಿಂಗ್ ಇಲ್ಲದೆ ಚಿತ್ರೀಕರಣದ ವೇಳೆಯೇ ಧ್ವನಿಮುದ್ರಿಸಿಕೊಂಡಿದ್ದರಿಂದ ಯಾವೊಂದು ಪಾತ್ರದ ಮಾತಿನಲ್ಲೂ ಸ್ಪಷ್ಟತೆ ಇಲ್ಲ. ಮೂರಲ್ಲ, ಎರಡು ಕೊಲೆ. ಒಂದು ನಿಗೂಢ ನಾಪತ್ತೆಯ ...ಕಂಡಂತೆ’ಯಲ್ಲಿ ಅಂತ್ಯದಲ್ಲಿ ಯಾರೂ ಸಾಯುವುದಿಲ್ಲ. ಪ್ರೇಕ್ಷಕನ ಹೊರತು ಎಂದು ಅದು ಷರಾ ಬರೆದಿದೆ. ನಿಜವಾಗಿ ಸತ್ತಿರುವುದು ಪ್ರೇಕ್ಷಕನಲ್ಲ; ಸತ್ತು ಪಾತಾಳಕ್ಕಿಳಿದಿರುವುದು ದಿನಪತ್ರಿಕೆಗಳಲ್ಲಿ ಚಿತ್ರವಿಮರ್ಶಕರ ವಸ್ತುನಿಷ್ಠೆ ಮತ್ತು ಸಮಷ್ಟಿಪ್ರಜ್ಞೆ. ಮತ್ತೇನಲ್ಲ. ಅಸಲಿಗೆ ಈ ವಿಮರ್ಶಕರೆಲ್ಲ ಈ ಚಿತ್ರದಲ್ಲಿ ’ಕಥೆ’ಯನ್ನು, ಕೊಲೆರಹಸ್ಯವನ್ನು ಕಂಡುಕೊಳ್ಳಲು ಏಕೆ ಪ್ರಯತ್ನಿಸಿದರೆಂಬುದೇ ಅರ್ಥವಾಗದ, ಅರ್ಥಹೀನ ವಿಚಾರ. ಸಿನೆಮಾ ಇರುವುದು ಆ ಘಟನೆಯ (ಕೊಲೆಯ) ಬಗ್ಗೆ ಅಲ್ಲ. ಆ ಘಟನೆಯನ್ನು ಅವರಿವರು ಹೇಗೆ ತಿಳಿದುಕೊಂಡಿದ್ದಾರೆ ಮತ್ತು ಬಣ್ಣಿಸುತ್ತಾರೆ ಎಂಬುದರ ಬಗ್ಗೆ. ಪ್ರೇಕ್ಷಕರಾಗಿ ನಾವು ಮಾಡಬೇಕಾದ್ದು ಸಹ ಆ ಕೊಲೆರಹಸ್ಯವನ್ನು ಬಿಡಿಸುವ ಕೆಲಸವನ್ನಲ್ಲ. ಅವರಿವರು ಅದನ್ನು ಬಣ್ಣಿಸುವಾಗ ತೆರೆದಿಟ್ಟುಕೊಳ್ಳುವ ಬದುಕಿನ ಬಣ್ಣಗಳನ್ನು ಆಸ್ವಾದಿಸುವುದು. ಬೇಕಿದ್ದರೆ ಅವುಗಳೊಂದಿಗೆ ನಮ್ಮನ್ನು ರಿಲೇಟ್ ಮಾಡಿಕೊಳ್ಳುವುದು. ಅಷ್ಟೇ. ಸಿಂಪಲ್. ಹಾಗೆ ಮಾಡಿದಾಗಿನ ಅನುಭೂತಿಯೇ ಬೇರೆ! ಮರದ ಆ ಪುಟ್ಟ ಆಟಿಗೆಯಲ್ಲಿ, ಉರಿಸಿಟ್ಟ ಲಾಟೀನುಗಳಲ್ಲಿ, ಒರಿಜಿನಲ್ ರೇಬಾನ್ ಕನ್ನಡಕವನ್ನು ತಾನೂ ಹಾಕಿಕೊಳ್ಳಬೇಕು ಎಂಬ ಆ ಹುಡುಗನ ಆಸೆಕಂಗಳಲ್ಲಿ, ದುಬೈಗೆ ಹೋಗುತ್ತೇನೆಂದು ಊರಿಗೆಲ್ಲ ಹೇಳುವ ಮೀನುಗಾತಿ ರತ್ನಕ್ಕನ ಸಡಗರದಲ್ಲಿ, ಯಕ್ಷಗಾನ ಬಯಲಾಟದಲ್ಲಿ, ಹುಲಿವೇಷದ ’ವೇಷ’ದಲ್ಲಿ, ಬೆರ್ಚಪ್ಪನಲ್ಲಿ,ಕಾಗೆಯ ಕೂಗಿನಲ್ಲಿ - ಹೀಗೆ ಚಿತ್ರದುದ್ದಕ್ಕೂ ರಕ್ಷಿತ್ ಶೆಟ್ಟಿ ಸೂಚ್ಯವಾಗಿ ತೋರಿಸಿರುವ subtle yet profound ಸಂಕೇತಗಳಷ್ಟೇ ಸಾಕು ಮೆದುಳು ಮತ್ತು ಬಾಯಿ ಏಕಕಾಲಕ್ಕೆ ಆಕಳಿಸುವುದನ್ನು ತಡೆಗಟ್ಟಲು. ಬಹುಶಃ ಈ ವಿಮರ್ಶಕರೆಲ್ಲ ಮೆದುಳನ್ನು ಮನೆಯಲ್ಲೇ ಬಿಟ್ಟುಹೋಗಿರ್ತಾರೆ ಸಿನೆಮಾ ನೋಡುವಾಗ ನನಗೆ ಹೀಗೂ ಅನಿಸುತ್ತದೆ. ಇದೇ ಚಿತ್ರ ಒಂದುವೇಳೆ ತಮಿಳು/ತೆಲುಗಿನಲ್ಲಿ ಕಮಲಹಾಸನ್‌ನಂಥವರೋ, ಹಿಂದಿಯಲ್ಲಿ ನಾನಾ ಪಾಟೇಕರ್‌ನಂಥವರೋ ಮಾಡಿದ್ದಿದ್ದರೆ ಇದೇ ಪತ್ರಿಕೆಗಳು ಏನೇನೆಲ್ಲ ಉಪಮೆ ಉತ್ಪ್ರೇಕ್ಷೆಗಳನ್ನು ಬಳಸುತ್ತಿದ್ದವು ಎಂದು ನಮಗೆಲ್ಲ ಗೊತ್ತೇ ಇದೆ. ಇಂಗ್ಲಿಷ್‌ನಲ್ಲಿ ಹಾಲಿವುಡ್ ನಿರ್ಮಿತವಾಗಿದ್ದರಂತೂ ಆಸ್ಕರ್ ನಾಮಿನೇಷನ್‌ಗೆ ಯೋಗ್ಯ ಎಂದು ಬರೆಯಲೂ ಅವು ನಾಚುತ್ತಿರಲಿಲ್ಲ (ಆಗಲೂ ಚಿತ್ರದ ವಸ್ತು/ಅರ್ಥ ತಮ್ಮ ತಲೆಯೊಳಗೆ ಹೊಕ್ಕಿರುತ್ತಿರಲಿಲ್ಲ, ಆ ಮಾತು ಬೇರೆ). ಆದರೆ ಕನ್ನಡದಲ್ಲಿ ಉತ್ಸಾಹಿ ಹುಡುಗನೊಬ್ಬ ಮಾಡಿದ್ದಾನೆಂದರೆ ಹಿತ್ತಲ ಗಿಡ ಮದ್ದಲ್ಲ ಧೋರಣೆ? ಅದೇ ದೊಡ್ಡ ದುರಂತ. ಕನ್ನಡಿಗರ ಮಟ್ಟಿಗಂತೂ ಅತಿದೊಡ್ಡ ಶಾಪ ಅದು. ಇರಲಿ. ಈ ಚಿತ್ರದ ಸ್ಪಷ್ಟ, ಸತ್ಯನಿಷ್ಠ ವಿಮರ್ಶೆ ಪತ್ರಿಕೆಯಲ್ಲಿ ಪ್ರಕಟವಾದದ್ದು ಓದಲೇಬೇಕು ಅಂತನಿಸಿದರೆ ನೀವು ಓದಬೇಕಾದ್ದು ಉದಯವಾಣಿಯಲ್ಲಿ ಬಂದಿರುವ ವಿಮರ್ಶೆಯನ್ನು. ವಾಸ್ತವಕ್ಕೆ ಸಮೀಪವಾದ, ಆದರೆ ಅನೇಕರಿಗೆ ಅಪರಿಚಿತವಾದ ಒಂದು ಜಗತ್ತನ್ನು ಸಿನಿಮಾದೊಳಗೆ ತಂದಿರುವುದು ರಕ್ಷಿತ್ ಸಾಧನೆ. ಕಡಲಕಿನಾರೆಯಲ್ಲಿ, ಬಂದರಿನ ಆಸುಪಾಸಿನಲ್ಲಿ, ಮೀನುಜೆಟ್ಟಿಯ ಸಮೀಪದಲ್ಲಿ ನಡೆದುಹೋಗುತ್ತಿದ್ದರೆ ನಿಮಗೆ ಎದುರಾಗುವ ದೃಶ್ಯ , ಕೇಳಿಸುವ ಸದ್ದು ಎರಡೂ ಚಿತ್ರದೊಳಗೆ ಹಾಗ್ಹಾಗೇ ಬಂದುಬಿಟ್ಟಿದೆ. ಎನ್ನುತ್ತದೆ ಆ ವಿಮರ್ಶೆ. ಮೇಲಿನ ವಿವರಣೆಯಲ್ಲಿ ನಾನು ಕಚ್ಚಾ ಹಲಸಿನಹಣ್ಣಿಗೆ ಹೋಲಿಸಿದ್ದು ಅದನ್ನೇ! ನಮಗೆ ಟಿನ್‌ನಲ್ಲಿ ಸಕ್ಕರೆಸಿರಪ್‌ನಲ್ಲಿ ಹಾಕಿಟ್ಟ ಹಲಸಿನ ತೊಳೆ ಇಷ್ಟ ಆಗೋಲ್ಲ. ಹಲಸಿನಹಣ್ಣನ್ನು ನಾವೇ ಕಡಿದು ತೊಳೆ ಬಿಡಿಸಿ ತಿನ್ನುವುದೆಂದರೆ ಪರಮಾನಂದ! ಮುಂದುವರಿಯುತ್ತ ಉದಯವಾಣಿ ಹೇಳುತ್ತದೆ- ಒಂದು ಸಿನೆಮಾ ನೋಡಿದ ನಂತರವೂ ನಮ್ಮನ್ನು ಗುಂಗಿನಲ್ಲಿಡಬೇಕು, ಒಂದು ಪರಿಸರಕ್ಕೆ ನಿಷ್ಠವಾಗಿರಬೇಕು, ಮತ್ತು ನಮ್ಮ ಅನುಭವದ ಒಂದು ಭಾಗವಾಗಬೇಕು ಎಂದು ಆಸೆಪಡವವರು ಇದನ್ನು ಪ್ರೀತಿಯಿಂದ ನೋಡಬಹುದು. ಎಂದು. ನನ್ನದೂ ಡಿಟೋ ಅದೇ ಅಭಿಪ್ರಾಯ! ಮೊನ್ನೆಮೊನ್ನೆ SKSE ಹಿಂದಿ ಚಿತ್ರವನ್ನು ನೋಡುವಾಗ ನಡುವೆ ಬೋರೆನ್ನಿಸಿ ಆಕಳಿಸಿದ್ದ ನಾನು ’ಉಳಿದವರು ಕಂಡಂತೆ’ಯನ್ನು ಭರಪೂರವಾಗಿ ಆನಂದಿಸಿದೆ, ಮನೆಗೆ ಬಂದು Raagaದಲ್ಲಿ ಹಾಡುಗಳನ್ನು, ಥೀಮ್ ಮ್ಯೂಸಿಕ್‌ಅನ್ನು ಮತ್ತೊಮ್ಮೆ ಕೇಳಿದೆ. ಅಂದಮೇಲೆ ಚಿತ್ರದ ಗುಂಗು ನನ್ನಲ್ಲಿ ಉಳಿದಿದೆ ಎಂದೇ ಅರ್ಥ ತಾನೆ? * * * ರಕ್ಷಿತ್ ಶೆಟ್ಟಿ ಮತ್ತು ಅವರ ಇಡೀ ತಂಡಕ್ಕೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಲೇ ವೈಯಕ್ತಿಕವಾಗಿ ನನಗೊಂದು ಅಂತರಾಳದ ಬಯಕೆಯೂ ಇದೆ. ಅದೇನೆಂದರೆ, ಈ ಚಿತ್ರವು ಪ್ರೇಕ್ಷಕ ಜನಸಾಮಾನ್ಯರ word-of-mouth ವಿಮರ್ಶೆಗಳಿಂದಲೇ ಪ್ರಚಾರ ಪಡೆದು ಭರ್ಜರಿ ಪ್ರದರ್ಶನಗಳಿಂದ ಶತದಿನೋತ್ಸವ ಸಂಭ್ರಮವನ್ನು ಕಾಣಬೇಕು. ಅದರ ನೆನಪಿಗೋಸ್ಕರ ರಕ್ಷಿತ್ ಶೆಟ್ಟಿ ಒಂದು ಚಿಕ್ಕಚೊಕ್ಕ ಸಮಾರಂಭವನ್ನು ಏರ್ಪಡಿಸಬೇಕು. ಕಪ್ರ, ಪ್ರವಾ, ವಿಕ ಮತ್ತು ವಿವಾ ಪತ್ರಿಕೆಗಳ ಆ ವಿಮರ್ಶಕ ಪ್ರಭೃತಿಗಳನ್ನು ಆಹ್ವಾನಿಸಿ ಮುಂದಿನ ಸಾಲಿನಲ್ಲಿ ಕುಳ್ಳಿರಿಸಿ, ಅವರನ್ನು ವಿಶೇಷವಾಗಿ ವೇದಿಕೆಗೆ ಕರೆತಂದು ಚಿತ್ರದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಈ ಮಹಾಶಯರುಗಳಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ ಎಂದು ಸ್ವತಃ ರಕ್ಷಿತ್ ಶೆಟ್ಟಿಯೇ ಅವರನ್ನು ಸನ್ಮಾನಿಸಬೇಕು. Having the last laugh ಎಂದರೆ ಹಾಗಿರಬೇಕು! Meanwhile, ನೀವಿನ್ನೂ ’ಉಳಿದವರು ಕಂಡಂತೆ’ ವೀಕ್ಷಿಸಿಲ್ಲವಾದರೆ, ಯಾವುದೇ ಪೂರ್ವಾಗ್ರಹವಿಲ್ಲದೆ ಚಿತ್ರವನ್ನು ವೀಕ್ಷಿಸಿ ಆನಂದಿಸಿ Shared by Shashank
Posted on: Mon, 31 Mar 2014 17:59:05 +0000

Trending Topics



Recently Viewed Topics




© 2015