ಈ ತರಹ ಏನೋ ಒಂದು ಆಗುತ್ತೆ - TopicsExpress



          

ಈ ತರಹ ಏನೋ ಒಂದು ಆಗುತ್ತೆ ಅಂತಾ ಮೂರ್ನಾಲ್ಕು ದಿನಗಳಿಂದ ಸ್ಮೆಲ್ ಹೊಡಿತಿತ್ತು ನನಗೆ . ಅದು ನಿನ್ನೆ ರಾತ್ರಿ ನಿಜವಾಗಿಬಿಟ್ಟಿದೆ . ಇದರಲ್ಲಿ ಹಂಸಾನಂದಿ ಯವರ ಕೈವಾಡದ ಜೊತೆಗೆ ಕೊಳ್ಳೆಗಾಲದ ಮಾಂತ್ರಿಕರ ಪಿತೂರಿಯೂ ಇದ್ದಂತಿದೆ . ಪುಸ್ತಕಗಳ ಬಗ್ಗೆ ಬರಿಯೋ ಆಟದ ಬಾವುಟವನ್ನು ರಾಮಪ್ರಸಾದರು ನನ್ನ ಕೈಗೆ ಕೊಟ್ತಿದ್ದಲ್ಲದೆ, ಹಾಸನದವರು ಒಬ್ಬರಿಗೊಬ್ಬರು ಆಗ್ತಾರೆ ಅನ್ನೋ ಹಾರ್ಟ್ ಟಚಿಂಗ್ ವಾಕ್ಯವನ್ನೂ ಹಾಕಿ ಜೈ ಅಲಕ್ ನಿರಂಜನ್ ಅಂತಾ ಎದ್ದು ಹೋಗಿದ್ದಾರೆ . ಇಷ್ಟಾದ ಮೇಲೆ ಒಬ್ಬರಿಗೊಬ್ಬರು ಆಗದಿದ್ರೆ ಹೇಗೆ ಹೇಳಿ ? . ಒಂದಷ್ಟು ಪುಸ್ತಕಗಳ ಬಗ್ಗೆ ಬರೀಬೇಕು ಅಂದ್ರೆ ಎಲ್ಲಿಂದ ಮೊದಲಾಗಬೇಕು ಅನ್ನೋದೆ ಸಮಸ್ಯೆಯಾಗುತ್ತೆ . ಆದರೂ ಒಂದಷ್ಟು ಸಮಯ ಹಿಂದೆ ಹಿಂದೆ ಹೋಗಿ ನೆನಪಿಸಿಕೊಂಡು ಬರೆಯಲು ಯತ್ನಿಸುತ್ತೇನೆ .... ಮೊದಮೊದಲು ಶಾಲಾಪಠ್ಯಪುಸ್ತಕದ ಹೊರತಾಗಿ ಓದಲು ಆರಂಭಿಸಿದ್ದು ಪ್ರಜಾಮತ ಎನ್ನುವ ವಾರಪತ್ರಿಕೆಯನ್ನು . ಆಗ ನಮ್ಮೂರು ಹಳ್ಳಿಯಾಗಿದ್ದುದರಿಂದ ಇದೊಂದೇ ನಮ್ಮನೆಗೆ ಬರ್ತಾ ಇದ್ದಿದ್ದು . ಅದರಲ್ಲಿ ಬರುತ್ತಿದ್ದ ಸಣ್ಣಕತೆಗಳು, ಹೆಬ್ಳೀಕರ್ ಅವರ ಚಿಂಗಾರಿ ಕಾರ್ಟೂನುಗಳು, ಯಂಡಮೂರಿಯವರ ಕಾದಂಬರಿಗಳು ಮತ್ತು ಕೆ . ನಾಗರಾಜರಾಯರು ಬರೆಯುತ್ತಿದ್ದ ನಕ್ಷತ್ರಜಾತಕ ಎನ್ನುವ ಅಂಕಣ . ಸ್ವಲ್ಪ ಸಮಯದ ನಂತರ ಚಂದಮಾಮ, ಬಾಲಮಂಗಳ ಇವೆಲ್ಲಾ ಓದಲು ಸಿಗೋಕ್ಕೆ ಶುರುವಾಯ್ತು . ಆಮೇಲೆ ಮಯೂರ, ಕಸ್ತೂರಿ, ಸುಧಾ, ತರಂಗ ಇತ್ಯಾದಿ . ಹೈಸ್ಕೂಲು ದಿನಗಳಲ್ಲಿ ಕುರುಕ್ಷೇತ್ರ ನಾಟಕ ಓದೋಕೆ ಅವಕಾಶ ಸಿಗ್ತು . ನನ್ನ ಶಾಲಾ ಮಾಸ್ತರರೊಬ್ಬರು ಆ ನಾಟಕದ ಪ್ರತಿಯನ್ನು ತಂದು ಅದನ್ನು ಮತ್ತೊಂದು ನೋಟ್ಬುಕ್ಕಿಗೆ ಬರೆದುಕೊಡಲು ಕೊಟ್ಟೆದ್ದರು . ಅಲ್ಲಿಂದ ಉದ್ದುದ್ದಾ ಅನೇಕ ನಾಟಕಗಳನ್ನು ಓದಿದ್ದಾಯಿತು . ಬೇಲುರು ಕೃಷ್ಣಮೂರ್ತಿಯವರು ಬರೆಯುತ್ತಿದ್ದ ಸಾಮಾಜಿಕ ನಾಟಕಗಳು . ವಿಜಜ್ವಾಲೆ, ಕರಿಬಂಟನಕತೆ , ಭಕ್ತ ಪ್ರಹ್ಲಾದ ಮುಂತಾದ ವೆರೈಟಿ ನಾಟಕಗಳೂ ಆದವು . ೬ ನೆಯ ತರಗತಿಯಿಂದ ನನ್ನ ಚಿಕ್ಕಜ್ಜನವರಿಂದ ಸಂಸ್ಕ್ರತ ಅಧ್ಯಯನ ಆರಂಭಿಸಿದಾಗ ಸಸ್ವರ ವೇದಮಂತ್ರಾಃ ಮುಂತಾದ ವೇದಪಾಠದ ಪುಸ್ತಕಗಳಿಂದ ಹಿಡಿದು ಶ್ರೀಮದ್ರಾರಾಮಾಯಣ, ಮುಹೂರ್ತದರ್ಪಣ, ಭವಿಷ್ಯೋತ್ತರ ಪುರಾಣ ಮತ್ತು ಮನೆಯವರ ಕಣ್ಣುತಪ್ಪಿಸಿ ಗರುಡಪುರಾಣವನ್ನೂ ಓದಿದ್ದುಂಟು . ಹತ್ತನೆಯ ತರಗತಿಯಲ್ಲಿದ್ದಾಗ ಧರ್ಮ ಸಂಕ್ರಾತಿ ಎನ್ನುವ ಯಕ್ಷಗಾನ ರೂಪಕವೊಂದನ್ನು ಓದಿದ್ದೆ . ಅದೇ ಯಕ್ಷಗಾನವನ್ನು ನನ್ನ ಕಾಲೇಜು ದಿನದಲ್ಲಿ ಸುಬ್ರಹ್ಮಣ್ಯ ಧಾರೇಶ್ವರರ ಭಾಗವತಿಕೆಯಲ್ಲಿ ಉಜಿರೆಯಲ್ಲಿದ್ದಾಗ ರಾತ್ರಿಯಿಡೀ ನೋಡುವ ಭಾಗ್ಯವೂ ಬಂದಿತ್ತು . ನನ್ನ ರಿಯಲ್ ಓದು ಆರಂಭವಾಗಿದ್ದೇ ಕಾಲೇಜು ದಿನಗಳಲ್ಲಿ ಎನ್ನಬಹುದು . ಉಜಿರೆಯ ಧ . ಮ . ಕಾಲೇಜಿನ ಲೈಬ್ರರಿಯಲ್ಲಿ ಸಿಗದಿರುವ ಪುಸ್ತಕವಾದರೂ ಉಂಟೆ . ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಸಣ್ಣಸಣ್ಣ ಪುಸ್ತಕಗಳನ್ನು ಓದಿದ್ದೆ . ಆರ್ಯಭಟ ನ ಕುರಿತಾಗಿ ಒಂದು ಪುಸ್ತಕ ಓದಿದ್ದೆ, ಲೇಖಕರ ಹೆಸರು ನೆನೆಪಾಗ್ತಿಲ್ಲ . ಕ್ಯುರಿಯಾಸಿಟಿಗೆ ಓದಿದ್ದ ಕಾಮಸೂತ್ರದ ಪುಸ್ತಕಗಗಳು ವಾತ್ಸಾಯನನ ಕಾಮಾಶಾಸ್ತ್ರವನ್ನು ಓದುವವರೆಗೂ ತಂದು ನಿಲ್ಲಿಸಿತ್ತು :). ಮೊದಮೊದಲು ಕವಿತೆಗಳನ್ನೇ ಹೆಚ್ಚು ಓದಿದ್ದು . ಕುವೆಂಪು ಅವರ ಪಾಂಚಜನ್ಯ, ಬೇಂದ್ರೆಯವರ ಗರಿ, ಗಂಗಾವತರಣ, ನಾದಲೀಲೆ, ನಾಕುತಂತಿ ; ಅಡಿಗರ ಪ್ರಾರ್ಥನೆ, ಕಟ್ಟುವೆವು ನಾವು, ; ಶಿಶುನಾಳ ಶರೀಫರ ಪದಗಳು, ಒಂದಷ್ಟು ವಚನಗಳು ....ಅಯ್ಯೋ ಇನ್ನೂ ಏನೇನೋ !. ಅಲ್ಲಿಂದ ಇಲ್ಲಿಯವರೆಗೂ ಸಾಕಷ್ಟು ಪುಸ್ತಕಗಳಾಗಿವೆ . ಮೂಕಜ್ಜಿಯ ಕನಸುಗಳು ಮತ್ತು ನಾಕುತಂತಿ ಬಿಟ್ರೆ ಪೀಠ ಪ್ರಶಸ್ತಿ ಬಂದಿರೋ ಇನ್ಯಾವ ಕೃತಿಯನ್ನೂ ಓದಿಲ್ಲ . ಮೊಗಳ್ಳಿ ಗಣೇಶರ ಕತೆಗಳು, ಅನಕೃ ಅವರ ಕಥಾಸಂಕಲನ , ಗೂರೂರರ ನಮ್ಮೂರಿನ ಹೈದರು, ಹಳ್ಳಿಯಚಿತ್ರಗಳು ; ಯೇಗ್ದಾಗೆಲ್ಲ ಐತೆ, ಪಂಚದಶೀ , ಉಪನಿಷತ್ ಭಾವಧಾರೆ, ಭೈರಪ್ಪನವರ ಎಲ್ಲಾ ಕಾದಂಬರಿಗಳು, ಮಾಲವಿಕಾಗ್ನಿ ಮಿತ್ರ , ಕೆ .ಟಿ . ಗಟ್ಟಿಯವರ ಕತೆಗಳು, ಕೆ . ಎನ್ . ಗಣೇಶಯ್ಯನವರ ಎಲ್ಲಾ ಕಥಾಸಂಕಲನ ಮತ್ತು ಕಾದಂಬರಿಗಳು (ಇತ್ತೀಚಿನ ಶಿಲಾಕುಲವಲಸೆ ಯ ವರೆಗೆ ), ಮಹಾಸಂಪರ್ಕ, ಯಶವನ್ತ ಚಿತ್ತಾಲರ ಕತೆಗಳು, ಜಯಂತ ಕಾಯ್ಕಿಣಿಯವರ ತೂಫಾನ್ ಮೈಲ್ ಮತ್ತಿತರ ಕವನ ಸಂಕಲನಗಳು , ಅ . ರಾ . ಮಿತ್ರರ ಕುಮಾರವ್ಯಾಸ ಭಾರತ ಪಾತ್ರ ಪರಿಚಯ . ಕರ್ಣಾಟ ಭಾರತ ಕಥಾಮಂಜರಿ, ವಿಕ್ರಮಾರ್ಜುನ ವಿಜಯ , ಗದಾಯುದ್ಧ, ಶತಾವಧಾನಿ ಗಣೇಶರ ಲೇಖನ ಸಂಗ್ರಹ ಮಥನ-ಕಥನ , ಹೊಕ್ಕುಳ ಬಳ್ಳಿಯ ಸಬಂಧ . ರಾಮಕೃಷ್ಣ ವಚನವೇದ, ಉಪನಿಷತ್ ಭಾವಧಾರೆ, ವಿವೇಕ ಚೂಡಾಮಣಿ, ಬ್ರಹ್ಮಸೂತ್ರಗಳು ಮುಂತಾದ ಅಧ್ಯಾತ್ಮಕ್ಕೆ ಸಬಂಧಿಸಿದ ಅನೇಕ ಪುಸ್ತಕಗಳು . ಜಿ . ಎನ್ . ರಂಗನಾಥರಾಯರ ಮಹಾಪ್ರಸ್ಥಾನ ಮತ್ತು ಇತರ ಕತೆಗಳು (ಮೂಲ : ಲಿಯೋ ಟಾಲ್ ಸ್ಟಾಯ್ ). ವಿವೇಕಾನಂದರ ಸೀರೀಸ್ ಪುಸ್ತಕಗಳು . ಡಿ .ವಿ . ಜಿ . ಯವರ ಕಗ್ಗಗಳು, ಜೀವ ಧರ್ಮ ಯೋಗ, ಏನೀ ಮಹಾನಂದವೇ (ಅಂತಃಪುರ ಗೀತೆಗಳು) ಕವನ ಸಂಕಲನ . ಚಿಲಿಯ ಕಲಿಗಳು, ವೋಲ್ಗಾ ಗಂಗಾ, ಹಂಸನಾದ, ಜೋಗಿಯವರ ಕೆಲವು ಕತೆಗಳು, ಬ್ಲಾಗ್ ಮಿತ್ರರ ಹೊಳೆಬಾಗಿಲು, ಬ್ಲಾಗಿಸು ಕನ್ನಡ ಡಿಂಡಿಮವ . ೧೯೫೩ ನೆಯ ಇಸವಿಯಿಂದ ಇಲ್ಲಿಯವರೆಗೆ ಪ್ರಕಟಗೊಂಡಿರುವ ಒಂಟಿಕೊಪ್ಪಲ್ ಮೈಸೂರು ಪಂಚಾಂಗ :) . ಪೂರ್ಣಚಂದ್ರ ತೇಜಸ್ವಿಯವರ ಎಲ್ಲಾ ಕತೆಗಳು, ದೇಶ-ವಿದೇಶ ಸೀರೀಸ್, ಮಹಾಯುದ್ಧ ಸೀರೀಸ್, ವಿಸ್ಮಯ ಸೀರೀಸ್, ಪಾಕಕ್ರಾಂತಿ, ಕೀಟಲೋಕ ಇತ್ಯಾದಿ . ಕಾರಂತಜ್ಜನ ಮರಳಿ ಮಣ್ಣಿಗೆ, ಹುಚ್ಚುಮನಸ್ಸಿನ ಹತ್ತು ಮುಖಗಳು . ನೇಮಿಚಂದ್ರ ಪವಿತ್ರಕಣಿವೆ ಪೆರುವಿನಲ್ಲಿ , ಬದುಕು ಬದಲಿಸಬಹುದು . ಚೆನ್ನಬಸವ ನಾಯಕ, ಚಿಕವೀರ ರಾಜೇಂದ್ರ ; ಕೆಳದಿಯ ಇತಿಹಾಸ, ಕೆಳದಿ ನೃಪ ವಿಜಯಂ, ತರಾಸು ಅವರ ಐತಿಹಾಸಿಕ ಕಾದಂಬರಿಗಳು .... ಇನ್ನೂ ತುಂಬಾ ಇದೆ ಇಲ್ಲಿ ಬರೆಯೋಕೆ ಆಗಲ್ಲ . ಇಂಗ್ಲಿಷ್ ಆದರೆ - ಟೆಂಪೆಸ್ಟ್ , ವಾರ್ ಅಂಡ್ ಪೀಸ್, ಹ್ಯಾಮ್ಲೆಟ್ , ಲ್ಯಾಟಿನ್ ಅಮೇರಿಕನ್ ಶಾರ್ಟ್ ಸ್ತೋರೀಸ್, ಫ್ರೆಡಿರಿಕ್ ಪೋರ್ಸಿತ್ ನ ನಾವೆಲ್ಗಳು ( ತುಂಬಾ ಮೆಚ್ಚಿದ್ದು ಓಡಿಸ್ಸಾ ಫೈಲ್ ) , ಅಡಾಲ್ಪ್ ಹಿಟ್ಳರನ ಮೈ ಕೆಂಪ್ , ಕುಲದೀಪ್ ನಾಯರ್ ರ ವಿತೌಟ್ ಫಿಯರ್ , ಶೆರ್ಲಾಕ್ ಹೋಮ್ಸ್ , Indus valley civilization, Brief history of time, Enigma, ಇನ್ನೂ ತುಂಬಾ ಇದೆ ಇಲ್ಲಿ ಬರೆಯೋಕೆ ಆಗಲ್ಲ :) . ಇವೆಲ್ಲದರ ನಡುವೆ ಒಂದಷ್ಟು ಪರಿಣಾಮಕಾರೀ ಓದು ಎನಿಸಿರುವ ಹತ್ತು ಪುಸ್ತಕಗಳನ್ನು ಹೇಳಲೇಬೇಕು . ೧ : ಎಪಿಗ್ರಾಫಿಕಾ ಕರ್ನಾಟಕಾ ( ಶಾಸನಗಳ ಕುರಿತು). ಇದು ಸುಮಾರು ೨೨/೨೮ ಸಂಪುಟಗಳಿರುವ ಒಂದೊಂದೂ ಒಂದೈದು ಕೆ .ಜಿ . ತೂಗಬಹುದಾದ ಪುಸ್ತಕ . ಕರ್ನಾಟಕದಲ್ಲಿ ದೊರೆತಿರುವ ಎಲ್ಲಾ ಶಾಸನಗಳ ಸರಳ ಕನ್ನಡ ಅನುವಾದವನ್ನು ಹೊಂದಿರುವ ಈ ಪುಸ್ತಕವನ್ನು ಬಹಳ ಹಿಂದೆಯೆ ರಾಜ್ಯ ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಸರಕಾರವೇ ಪ್ರಕಟಪಡಿಸಿದೆ . ಸದ್ಯ ನನ್ನ ಬಳಿ ಹಾಸನ ಜಿಲ್ಲೆಯ ಶಾಸನಗಳನ್ನೊಳಗೊಂಡಿರುವ ೧೨ ನೆಯ ಸಂಪುಟವು ಇದೆ . ಮ . ನಾ . ಮೂರ್ತಿಯವರ ನಾಟ್ಯರಾಣಿ ಶಾಂತಲಾ ಓದಿದ ನಂತರ ಈ ಸಂಪುಟವನ್ನು ಅಧ್ಯಯನ ಮಾಡಿದಾಗ ಕಾದಂಬರಿಗಳಿಗೂ ಇತಿಹಾಸಕ್ಕೂ ಎಷ್ಟೆಲ್ಲಾ ಅಂತರವಿರುತ್ತದೆ ಎಂದು ಅರಿವಾಯಿತು . ಇದಕ್ಕೆ ಅಯ್ಯರ್ ಅವರ ಶಾಂತಲಾ ಕಾದಂಬರಿಯೂ ಹೊರತಲ್ಲ . ಇಡೀ ಹೊಯ್ಸಳ ರಾಜ್ಯಾಡಳಿತ ಚಿತ್ರಣವನ್ನು ಈ ೧೨ ನೆಯ ಸಂಪುಟವು ಅಚ್ಚುಕಟ್ಟಾಗಿ ತೆರೆದಿಡುತ್ತದೆ . ಕಾಲಿದಾಸೀ ಎನ್ನುವ ಮಹಿಳೆಯೊಬ್ಬಳೂ ಸಹ ಹೊಯ್ಸಳರ ಕಾಲದ ಅತ್ಯುತ್ತಮ ಶಿಲ್ಪಿಯಾಗಿದ್ದಳು ಎನ್ನುವುದನ್ನು ಅರಿಯಬೇಕಿದ್ದರೆ ಈ ಸಂಪುಟವನ್ನು ಓದಲೇಬೆಕು. ಯಾವ ಕಾದಂಬರಿಯಲ್ಲೂ ಈ ತರಹದ ಉಲ್ಲೇಖಗಳು ಬರುವುದಿಲ್ಲ . ನನ್ನ ಇತಿಹಾಸವನ್ನು ಓದುವ ಹುಚ್ಚಿಗೆ ಈ ಪುಸ್ತಕವೇ ಮುನ್ನುಡಿಯಾದದ್ದು . ೨ . ಗೀತಾಭಾವಧಾರೆ ಭಗವದ್ಗೀತೆಯ ಎಲ್ಲಾ ಶ್ಲೋಕಗಳಿಗೆ ವಿವರವಾದ ವಿವರಣೆಗಳನ್ನು ಸೋಮನಾಥಾನಂದರು ಸರಳ ಕನ್ನಡದಲ್ಲಿ ಬರೆದುಕೊಟ್ಟಿರುವ ಪುಸ್ತಕವಿದು . ರಾಮಕೃಷ್ಣ ಆಶ್ರಮದವರು ಪ್ರಕಟಿಸಿದ್ದಾರೆ . ೩ . ಕರ್ಣಾಟಕ ಸಂಸ್ಕೃತಿ ಸಮೀಕ್ಷೆ ಕರ್ಣಾಟಕದ ಹೆಸರಿನ ಹುಟ್ಟಿನಿಂದ ಹಿಡಿದು ಇಲ್ಲಿಯವರೆಗಿನ ಸಮಗ್ರ ಚಿತ್ರಣವನ್ನು ಈ ಪುಸ್ತಕವು ಕಟ್ಟಿಕೊಡುತ್ತದೆ . ಭಾಷೆ , ಇತಿಹಾಸ , ಸಾಹಿತ್ಯ, ಜನಪದ ಎಲ್ಲದರ ಹಂತಹಂತವಾದ ಬೆಳವಣಿಗೆಯನ್ನು ತುಂಬ ಸರಳವಾಗಿ ಸ್ಪಷ್ಟವಾಗಿ ಕಟ್ಟಿಕೊಡುವ ಪುಸ್ತಕವಿದು . ಒಂದು ಅಪವಾದವೆಂದರೆ ಇತಿಹಾಸಕ್ಕೆ ಸಂಬಂಧಪಟ್ಟ ಕೆಲವು ವಿಷಯಗಳನ್ನು ಅಪ್ಡೇಟ್ ಮಾಡುವ ಅಗತ್ಯವಿದೆ ಎಂದೆನಿಸುತ್ತದೆ . ಈ ಪುಸ್ತಕವು ಪ್ರಕಟಣೆಯಾದ ನಂತರ ಎಷ್ಟೋ ಉತ್ಖನನಗಳಾಗಿ . ಪಳೆಯುಳಿಕೆಗಳು ದೊರೆತಿವೆ . ಇತಿಹಾಸದ ಕೆಲವು ವಿಚಾರಗಳು ಬದಲಾಗಿವೆ . ಅವುಗಳನ್ನು ಸೇರಿಸುವ/ಸರಿಪಡಿಸುವ ಅಗತ್ಯವಿದೆ . ಇಷ್ಟರ ಹೊರತಾಗಿ ಇದೊಂದು ಅಪೂರ್ವ ಪುಸ್ತಕ . ಲೇಖಕರು : ಡಾ || ಎಚ್ . ತಿಪ್ಪೇರುದ್ರಸ್ವಾಮಿ . ೪ . ಆಗಮ ಕೋಶ (ಇಂಗ್ಲಿಷ್ ) A Project on Aagama Aalaya Aaraadhanaa ಎನ್ನುವ ಕೋಟ್ ನಲ್ಲೇ ಪುಸ್ತಕದ ಉದ್ದೇಶವು ತಿಳಿಯುತ್ತದೆ . ಬೆಂಗಳೂರಿನ ಕಲ್ಪತರು ರಿಸರ್ಚ್ ಅಕಾಡೆಮಿಯವರು ಹೊರತಂದಿರುವ ೧೨ ಸಂಪುಟಗಳ ಪುಸ್ತಕವಿದು . ವಿದ್ವಾನ್ ಸಾ . ಕೃ . ರಾಮಚಂದ್ರರಾಯರ ಮಾರ್ಗದರ್ಶನದಲ್ಲಿ ಈ ಪುಸ್ತಕಗಳ ವಿಷಯವನ್ನು ಸಂಗ್ರಹಿಸಲಾಗಿದೆ . ದೇವಾಲಯಗಳು ಬೆಳೆದು ಬಂದ ಇತಿಹಾಸ, ಅಲ್ಲಿಯ ಆಚರಣೆಗಳು ಮತ್ತು ಅವುಗಳಿಗಿರುವ ಐತಿಹಾಸಿಕ ಮಹತ್ವಗಳನ್ನು ತಾಳೆಗರಿ ಗ್ರಂಥಗಳಿಂದ ಹಿಡಿದು ಶಾಸನಗಳ ಅಧ್ಯಯನದವರೆಗೂ ಇಟ್ಟುಕೊಂಡು ಪೂರ್ವಗ್ರಹವಿಲ್ಲದೆ ತುಂಬ ನಿಷ್ಠುರವಾಗಿ ಮಂಡಿಸಿರುವ ವಿಚಾರಗಳ ಸಂಗ್ರಹವಿದು . ಪ್ರತಿಯೊಂದು ಸಂಗತಿಗೂ ಉಲ್ಲೇಖಗಳಿರುವುದು ಈ ಪುಸ್ತಕದ ವಿಶೇಷ . ಶೈವ, ಶಾಕ್ತ, ಪಾಮ್ಚರಾತ್ರ , ತಂತ್ರಸಾರ ಆಗಮಗಳಲ್ಲದೆ ಇನ್ನೂ ಅನೇಕ ಪುರಾತನ ಆಗಮಗಳ ಪರಿಚಯವನ್ನು ಈ ಪುಸ್ತಕವು ಮಾಡಿಕೊಡುತ್ತದೆ . ಇತಿಹಾಸದಲ್ಲಿ ಆಸಕ್ತಿಯಿರುವವರಿಗೆ ಈ ಪುಸ್ತಕವು ಉತ್ತಮ ಮಾರ್ಗದರ್ಶಿಯಾಗಬಲ್ಲುದು. ೫ . ಕಥಾಜಗತ್ತು ಎಸ್ . ದಿವಾಕರರು ಅನ್ಯಭಾಷೆಗಳಿಂದ ಕನ್ನಡಕ್ಕೆ ತಂದಿರುವ ಕಥಾಸಂಗ್ರಹದ ಪುಸ್ತಕವಿದು . ಒಂದೊಂದು ಕತೆಯೂ ಹೊಸ-ಹೊಸ ಸಾಧ್ಯತೆಗಳನ್ನು ತೆರೆದಿಡುತ್ತದೆ . ಕತೆ ಬರೆಯುವವರು ಅಧ್ಯಯನಕ್ಕೂ ಇಟ್ಟುಕೊಳ್ಳಬಹುದಾದ ಪುಸ್ತಕವಿದು ೬ . ಮೇಘದೂತ (ಅಂಬಿಕಾತನಯದತ್ತ) ದ . ರಾ . ಬೇಂದ್ರೆಯವರು ಮೂಲದೊಡನೆ ಕನ್ನಡಕ್ಕೆ ತಂದಿರುವ ಈ ಪುಸ್ತಕ ನನಗಿಷ್ಟವಾದದ್ದು ಅದರಲ್ಲಿ ಸರಳ ಕನ್ನಡ ನುಡಿಗಟ್ಟುಗಳಿಂದ . ಮೇಘನ ಜರ್ನಿಯನ್ನು ಕಾಲಿದಾಸನಿಂದ ಕನ್ನಡಕ್ಕೆ ತಂದ ಬೇಂದ್ರೆಯವರು ಕಡೆಯಲ್ಲಿ ಎರಡು ಪದ್ಯಗಳನ್ನು ಕಾಲಿದಾಸನ ಋಣಸಂದಾಯಕ್ಕೇ ಮೀಸಲಿಟ್ಟಿದ್ದಾರೆ . ಪೂರ್ವ ಮೇಘ ಮತ್ತು ಉತ್ತರ ಮೇಘ ಎನ್ನುವ ಎರಡು ವಿಭಾಗಗಳಲ್ಲಿ ಮೇಘನ ಸಂಚಾರವನ್ನು ಕಟ್ಟಿಕೊಡುತ್ತಾರೆ . ವಾಮನಬೇಂದ್ರೆಯವರು ಈ ಪುಸ್ತಕದ ಸಂಗ್ರಹಕಾರರು . ಕಾಲಿದಾಸನನ್ನು ಹತ್ತಿರದಿಂದ ನೋಡಬಯಸುವವರು ಈ ಪುಸ್ತಕವನ್ನೊಮ್ಮೆ ಓದಬಹುದು . ೭ . ಕೈಲಾಸಂ ಕೃತಿಗಳು . ಕೈಲಾಸಂ ಅವರ ಅಷ್ಟೂ ನಾಟಕಗಳು, ಕತೆಗಳು , ಪದ್ಯಗಳು ಮತ್ತು ಸಾಹಿತ್ಯ ಸಮ್ಮೇಳದಲ್ಲಿ ಅವರು ಮಾಡಿರುವ ಅಧ್ಯಕ್ಷೀಯ ಭಾಷಣವನ್ನೂ ಈ ಪುಸ್ತಕವು ಒಳಗೊಂಡಿದೆ . ಈ ಪುಸ್ತಕದಲ್ಲಿ ಕೈಲಾಸಂ ಇಡಿಯಾಗಿ ದಕ್ಕುತ್ತಾರೆ . ಕೃಷ್ಣರಾಜ ಪರಿಷನ್ಮಂದಿರವು ಹುಟ್ಟಿದ ನಂತರ ಸರಕಾರವೇ ಪ್ರಕಟಿಸಿರುವ ಪುಸ್ತಕಗಳಲ್ಲಿ ಇದೂ ಒಂದು . ನನ್ನ ಬಳಿಯಿರುವುದು ಆಗಿನ ಪುಸ್ತಕ, ಈಗಿನ ಕತೆಯೇನೋ ಗೊತ್ತಿಲ್ಲ . ೮ . History of Napoleon Bonaparte ಇಂಗ್ಲಿಷ್ ಭಾಷೆಯ ಪುಸ್ತಕ . ನೆಪೋಲಿಯನ್ ಎಂಬ ಕೇಳಿದಾಗಲೇ ಎನೋ ಒಂದು ರಿತಿಯ ಮಿಂಚಿನ ಸಂಚಾರವಾಗುತ್ತದೆ . ಆತನ ಬಗ್ಗೆ ಹೈಸ್ಕೂಲು ಕಾಲೇಜು ದಿನಗಳಿಂದಲೂ ಕೇಳುತ್ತೇಲೆ ಬಂದಿದ್ದೆ . ಈ ಪುಸ್ತಕ ಓದಿದ ನಂತರ ಆತನ ಬಗೆಗೆ ತಿಳಿಯದ ಅನೇಕ ವಿಚಾರಗಳನ್ನು ತಿಳಿಕೊಂಡತಾಯಿತು . ಲೇಖಕರು : Jhon Gibson Lockhart ೯ . ಸಂಧ್ಯಾರಾಗ . ( ಅ . ನ . ಕೃಷ್ಣರಾಯರು ) ೧೦ . ನೆಹರು ಪರದೆ ಸರಿದಾಗ ( ಚಕ್ರವರ್ತಿ ಸೂಲಿಬೆಲೆ ) ಮೇಲಿನೆರಡು ಪುಸ್ತಕಗಳ ಬಗ್ಗೆ ಹೇಳುವ ಅಗತ್ಯವೇ ಇಲ್ಲ ಎಂದೆನಿಸುತ್ತಿದೆ . ನಿಮಗೆಲ್ಲಾ ಗೊತ್ತೇ ಇರುತ್ತದೆ . ಇಷ್ಟು ಹೇಳಿ ನನ್ನ ಮಾತನ್ನು ಮುಗಿಸುತ್ತಿದ್ದೇನೆ. ಬಾವುಟವನ್ನು Vikas Hegde ಇವರಿಗೆ ಕೊಟ್ಟಿದ್ದೇನೆ . Thanks to Ramaprasad KV
Posted on: Tue, 09 Sep 2014 08:04:30 +0000

© 2015