ನಾನು ಕಥೆ ಬರೆಯಲು - TopicsExpress



          

ನಾನು ಕಥೆ ಬರೆಯಲು ಪ್ರಾರಂಭಿಸಿದಾಗ ಮೂರು ನಿಯಮಗಳನ್ನು ನನಗೆ ನಾನೇ ಹಾಕಿಕೊಂಡೆ ೧) ನನ್ನ ಕಥೆಗಳು ಯಾರ ಮಾನಸಿಕ ಸ್ಥಿತಿಯನ್ನು ಕಲಕಬಾರದು, ತಲೆ ಕೆಡಿಸಬಾರದು ೨) ನನ್ನ ಕಥೆ ಕೇವಲ ಮನರಂಜನೆ ಕೊಡಬೇಕು; ಓದಿ ಮರೆತು ಬಿಡುವಂತಿರಬೇಕು. ೩) ನನ್ನ ಕಥೆಗಳು ಹತ್ತಿರದವರ, ದೂರದವರ, ಪರಿಚಿತರ ಬದುಕನ್ನು ಹೋಲುವಂತಿದ್ದು ಅವರಿಗೆ ಮಾನಸಿಕ ನೆಮ್ಮದಿ ಕೆಡಿಸಬಾರದು ಆದರೆ ನಾನು ಕಥೆ ಬರೆಯುತ್ತ ಹೋದಂತೆ ಈ ಮೂರೂ ನಿಯಮಗಳನ್ನು ನಾನೇ ಉಲ್ಲಂಘಿಸಿದೆ, ಅವುಗಳ ಕಟ್ಟುಪಾಡುಗಳನ್ನು ಮೀರಲೇಬೇಕಾಯಿತು. ಕಥೆಗಳನ್ನು ಬರೆಯುತ್ತಾ ನಾನೂ ಬೆಳೆಯುತ್ತಿರುವೆನೇನೋ ಎಂಬ ಭಾವ ತುಂಬಿಕೊಳ್ಳತೊಡಗಿತು. ನನ್ನ ಹತ್ತಿರ ಬರುವ ಜನ , ಅವರ ನಡೆ ನುಡಿ, ಒಂದು ಉದ್ಧೇಶ ಇಟ್ಟುಕೊಂಡು ಅವರು ಮಾತನಾಡುವುದು, ತತ್ ಕ್ಷಣಕ್ಕೆ ಅವರು ಕೊಡುವ ಪ್ರತಿಕ್ರಿಯೆ, ಸ್ವಾರ್ಥಮಯ ಪ್ರವೃತ್ತಿ, ಅವರ ’ಕೆಲಸವಾದರೆ ಆಯಿತ” ಎಂಬ ಧೋರಣೆಗಳು, ಆಡುವ ಮಾತಿನ ಹಿಂದೆ ಮತ್ತೊಂದು ಮಾತಿರುವುದು, ಮಾರ್ಮಿಕವಾಗಿ ಮಾತನಾಡುವುದು, ಹೇಳಿದ್ದನ್ನೇ ಹೇಳಿ ತಮ್ಮ ಉದ್ಧೇಶ ಸಾಧಿಸಿಕೊಳ್ಳುವುದು. ಕೆಲಸವಾದ ಮೇಲೆ ’ಬ” ಹೇಳಿ ಹೋಗುವುದು ಇತ್ಯಾದಿಗಳನ್ನು ನೋಡುತ್ತ ನಾನು ಒಬ್ಬ COLLECTOR OF HUMAN PECULIARITES ಆಗಿಬಿಟ್ಟೆ. ಒಬ್ಬ ಸೈಕಾಲಜಿಷ್ಟ್ ಆಗಿಬಿಟ್ಟೆ. ನನ್ನ ಹತ್ತಿರ ಬರುವ ಪ್ರತಿಯೊಬ್ಬ ವ್ಯಕ್ತಿ ನನಗೊಂದು SPECIMEN ಆಗಿ ಕಾಣಿಸತೊಡಗಿದ. ನನ್ನ ಯಾವುದೋ ಒಂದು ಕಥೆಯಲ್ಲಿ ಪಾತ್ರವಾಗಿ ಬರತೊಡಗಿದ, ಅಥವ ಅವನಾಡಿದ್ದ ಮಾತುಗಳು ಕಥೆಯ ಪಾತ್ರಗಳು ಆಡುವ ಮಾತುಗಳಾದವು. ನಾನು ಸಾಮನ್ಯವಾಗಿ ಮಾತನಾಡುವುದು ಬಹಳ ಕಡಿಮೆ; ನನ್ನನ್ನು ಬಂಧುವರ್ಗದಲ್ಲಿ ’ಮುಖಹೀನ’ಎಂದು ಕರೆಯುತ್ತಾರೆ. ಆದರೆ ನನ್ನ ಕಥೆಯ ಪಾತ್ರಗಳು ತುಂಬ ವಾಚಾಳಿಗಳು; ಈ ಗುಣ ಅವುಗಳಲ್ಲಿ ಹೇಗೆ ಬರಲು ಸಾಧ್ಯವಾಯಿತು? ನಾನು ಜನರನ್ನು ಹತ್ತಿರದಿಂದ ನೋಡಿದ್ದು, ಅಭ್ಯಸಿಸಿದ್ದು, , ಅವರಾಡಿದ ಮಾತುಗಳನ್ನು ಕಥೆಗಳಲ್ಲಿ ಭಟ್ಟಿ ಇಳಿಸಿದ್ದರಿಂದ ಸಾಧ್ಯವಾಯಿತು. ನನ್ನ ಈ ವರ್ತನೆಯಿಂದ ಕೆಲವು ಜನರಿಗೆ ಬೇಸರವಾಗಿದೆ, ಕಾರಣ ಅವರು ನನ್ನ ಕಥೆಗಳಲ್ಲಿ ವಿಲನ್ ಗಳಾಗಿಯೋ, ಕೆಟ್ಟ ಪಾತ್ರಗಳಾಗಿಯೋ, ಸ್ವಾರ್ಥಿಗಳಾಗಿಯೋ , ಅವಕಾಶವಾದಿಗಳಾಗಿಯೋ ಚಿತ್ರಿತವಾಗಿದ್ದಾರೆ. ಕೆಲವು ಬಂಧು ಜನರಂತೂ ನನ್ನ ಕಥೆಗಳಿಗೆ ಬಹಿಶ್ಕಾರ ಹಾಕಿದ್ದಾರೆ, ನನ್ನ ಕಥೆಗಳನ್ನು ಓದುವುದಿಲ್ಲ. ಕಥೆಗಾರನ ಯಶಸ್ಸನ್ನು ಅವನ ಓದುಗರ ಸಂಖ್ಯೆಯಿಂದ ಅಳೆಯಬಹುದು. ತೀರಾ ಅಪರಿಚಿತರು ಫೋನು ಮಾಡಿ, ಅಥವ ಚಾಟ್ ಗೆ ಬಂದು ಮೆಚ್ಚುಗೆ ಸೂಚಿಸಿದಾಗ ಒಂದು ಕ್ಷಣ ತೆಳುವಾಗಿ ಒಂದು ಸಾರ್ಥಕತೆಯ ಭಾವ ತೇಲಿಬರುತ್ತದೆ. ಇಷ್ಟು ಸಾಕು ನನಗೆ !
Posted on: Thu, 08 Aug 2013 15:03:48 +0000

Trending Topics



Recently Viewed Topics




© 2015