ಶ್ರೀನಿವಾಸ್ ನಿಮ್ಮ ಈ - TopicsExpress



          

ಶ್ರೀನಿವಾಸ್ ನಿಮ್ಮ ಈ ಪೋಸ್ಟ್ ನಿಂದ ನನಗೆ ಏಕಕಾಲದಲ್ಲಿ ಸಂತೋಷ ಮತ್ತು ಬೇಸರ ಎರಡೂ ಆಯಿತು. ಮೊದಲಿಗೆ ಸಂತೋಷದ ಬಗ್ಗೆ ಹೇಳುವೆ: ನೀವು ಇದೇ ಮೊದಲಬಾರಿ ಇಷ್ಟೊಂದು ಮೆಲುದನಿಯಲ್ಲಿ, ಸೂಕ್ತ ಪದಗಳಲ್ಲಿ ಉತ್ತರಿಸಿದ್ದೀರಿ.(ನಿಮ್ಮ ಹಿಂದಿನ ಎಲ್ಲ ಪೋಸ್ಟ್ ಮತ್ತು ಕಮೆಂಟ್ ಗಳನ್ನು ಗಮನಿಸಿ. ಅಲ್ಲಿ ಬಳಸಿರುವ ಭಾಷೆ, ಆಕ್ರೋಶ ಎಲ್ಲವೂ) ಹಾಗೆಯೇ ಜಾತಿಮುಕ್ತ ಸಮಾಜಕ್ಕೆ ಕೈ ಜೋಡಿಸಿ ಅಂದಿದ್ದೀರಿ. ಇದು ಒಳ್ಳೆಯ ಬೆಳವಣಿಗೆ ಮತ್ತು ಆರೋಗ್ಯಪೂರ್ಣ ಮನಸ್ಥಿತಿಯವರ ಗುಣ... ಇನ್ನು ಬೇಸರದ ಸಂಗತಿ ಎಂದರೆ: ನಿಮ್ಮ ಹಳೆಯ ಪ್ರಶ್ನೆಗಳಿಗೆ ಪಾಲೀಶ್ ಹಾಕಿ ಮತ್ತೆ ಹೇಳಲು ಯತ್ನಿಸಿರುವುದು. ನಾನು ಬಡಗಿಯಾಗಿ ಅನುಭದ ಮಾತಿನಲ್ಲಿ ಹೇಳುತ್ತಿದ್ದೇನೆ; ಒಂದು ಸಾರಿ ಪಾಲೀಶ್ ಬಿಟ್ಟ ಮರಕ್ಕೆ ಮತ್ತೆ ಪಾಲೀಶ್ ಮಾಡಿದರೆ ಹೆಚ್ಚುದಿನ ಬಾಳಿಕಿ ಬರದು. ಅದರ ವಾಸನೆ ಇದ್ದಷ್ಟು ದಿನ ಮಾತ್ರ! ಹಾಗೆಯೇ ನಿಜವಾದ ಬಲವುಳ್ಳವನು ನಾನು ಬಲಿಷ್ಟ ಪರಾಕ್ರಮಿ ಎಂದು ಸಾರಿಕೊಳ್ಳುವುದಿಲ್ಲ. ನಮ್ಮೂರಲ್ಲಿ ಒಬ್ಬನ ಹುಡುಗನ ತಂದೆ ಕೊಲೆಮಾಡಿ ಜೈಲಿಗೆ ಹೋದ. ಆ ಹುಡುಗನನ್ನು ಕೊಲೆಗಡುಕನ ಮಗನೆಂದೇ ಕರೆಯುತ್ತಿದ್ದರು. ಕಾಲ ಕಳೆದಂತೆ ಆ ಹುಡುಗ ಒಳ್ಳೆಯವನೆಂದು ಗೊತ್ತಾದಮೇಲೆ ಸುಮ್ಮನಾದರು. ಮತ್ತ ಮತ್ತೆ ಯಾರೋ ಮಾಡಿದ ತಪ್ಪು, ಪೂರ್ವಜರದ್ದು ಎಂದು ಹೇಳುತ್ತಲೇ ಇದ್ದೀರಿ... ಇತ್ತೀಚೆಗೆ ನಡೆದ ಹಿಂಸೆಗಳು, ಜೀತಪದ್ಧತಿಯ ಪ್ರಕರಣಗಳು, ಜಾತಿ ಗಲಭೆಗಳ ಬಗ್ಗೆ ಪ್ರಶ್ನಿಸಿದರೆ ನೀವು ಉತ್ತರಿಸಲೇ ಇಲ್ಲ. ಮತ್ತದೇ ಹಿಂದೆ ಯಾರೋ ಮಾಡಿದ ತಪ್ಪು. ಇತ್ತೀಚೆಗೆ ಮಾಡಿದ ಗಲಭೆಗಳು ಪೂರ್ವಜರ ದೆವ್ವಗಳಾ? ನೀವು ಮುಸಲ್ಮಾನರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಕ್ರೈಸ್ತರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಎಂದು ಅವರ ವಿರುದ್ಧ ಎತ್ತಿಕಟ್ಟುವ ಮಾತುಗಳನ್ನು ಆಡುತ್ತೀರಿ... ನಮಗೆ ನಿಜವಾಗಿಯೂ ಅನ್ಯಾಯ ಆಗಿರುವುದು ಜಾತಿವಾದಿಗಳಿಂದ ಮಾತ್ರ.. ನಮ್ಮೂರಿನ ಮುಸ್ಲಿಮರು ಯಾವತ್ತೂ ನನ್ನನ್ನು ಜಾತಿಯ ಕಾರಣದಿಂದ ನೋಡೇ ಇಲ್ಲ... ಎಷ್ಟೋ ಸಾರಿ ಮನೆಗೆ ಕರೆದು ಊಟ ಹಾಕಿ ಕಳಿಸಿದ್ದಾರೆ. ಅದೇ ಜಾತೀವಾದಿಗಳು ನಮ್ಮ ನೆರಳನ್ನು ಕಂಡರೆ ಬೆಂಕಿ ಕಂಡಹಾಗೆ ಆಡುತ್ತಾರೆ (ನಾನು ಇಷ್ಟು ಓದಿ ತಿಳಿದುಕೊಂಡು, ನಾಲ್ಕೈದು ಪುಸ್ತಕಗಳನ್ನು ಬರೆದಿದ್ದರೂ ಕೂಡ ನನ್ನನ್ನು ಮಾತನಾಡಿಸುವ, ನಡೆಸಿಕೊಳ್ಳುವ ಶೈಲಿಯಲ್ಲಿ ಬದಲಾವಣೆ ಆಗೇ ಇಲ್ಲ) ಮತ್ತೆ ನಮ್ಮೂರಲ್ಲಿರುವ ಕ್ರೈಸ್ತ ಮಿಷನರಿಗಳು ಬರ ಬಂದ ಕಾಲದಲ್ಲಿ ಇಡೀ ಊರನ್ನೇ ಅಲ್ಲದೇ ಅಕ್ಕ-ಪಕ್ಕದ ಹತ್ತು ಗ್ರಾಮಗಳನ್ನು ಪೋಷಿಸಿವೆ. ನಮಗೆ ಅಂದರೆ ಸ್ವತಃ ನನಗೇ ಪುಸ್ತಕಗಳನ್ನು ಒದಗಿಸಿದೆ. ಈ ರೀತಿಯ ಕೆಲಸ ಯಾವ ಮಠಗಳು (ಕೆಲವು ಮಠಗಳನ್ನು ಬಿಟ್ಟು... ಉದಾ: ಸಿದ್ಧಗಂಗಾ ಥರದ ಮಠಗಳು) ಮಾಡಿವೆ ಹೇಳಿ? ಎಷ್ಟೋ ಮಠಗಳು ಪೂಜಾರಿಗಳನ್ನು ಉತ್ಪಾದಿಸುವ ಕಾರ್ಖಾನೆಗಳಂತೆ ಕೆಲಸ ಮಾಡಿವೆ... ಮತ್ತು ಮಾಡುತ್ತಿವೆ ಕೂಡ. ನಾನೂ ಕೂಡ ಯಾವುದೇ ವ್ಯರ್ಥ ಕಾರ್ಯಾಲಾಪಕ್ಕೆ ಬಿದ್ದು ಅಸಂಬದ್ಧವಾಗಿ ನಿಮ್ಮೊಡನೆ ಮಾತನಾಡುತ್ತಿಲ್ಲ. ನಾಲ್ಕೈದು ವರ್ಷಗಳ ಹಿಂದೆ ಮಹೇಂದ್ರಕುಮಾರ್ ಎಂಬುವವರು ಭಜರಂಗದಳ ಬಿಟ್ಟು, ಜಾತಿಯತೆಯ ಗುಣ ಬಿಟ್ಟುಬಂದು ಆರೋಗ್ಯಪೂರ್ಣರಾಗಿ ಬದುಕಿದ್ದಾರಲ್ಲ.... ಅದೇ ರೀತಿ ನೀವೂ ಕೂಡ ಆಗುತ್ತೀರೆಂಬ ಸಣ್ಣ ಆಶಾವಾದದಿಂದ ಅಷ್ಟೆ...
Posted on: Sun, 01 Sep 2013 18:01:46 +0000

Trending Topics



Recently Viewed Topics




© 2015